ಅಜೀರ್ಣ 
	ಆಹಾರನಾಳದಲ್ಲಿ ಏನಾದರೂ ಕೆಟ್ಟೋ ತಿನ್ನಬಾರದ್ದನ್ನು ತಿಂದೋ, ಕುಡಿದೋ ಹೊಟ್ಟೆ, ಎದೆಯ ಕೆಳಭಾಗ, ಇಲ್ಲವೇ ಕಿಬ್ಬೊಟ್ಟೆಯಲ್ಲಿ ನೋವು, ನುಲಿತ, ಭಾರವಿರುವಂಥ ಅನುಭವ ಆಗುವುದೇ ಅಜೀರ್ಣ (ಅಗ್ನಿಮಾಂದ್ಯ). ಇದು ಇನ್ನೂ ಹೆಚ್ಚಿಕೊಂಡು ಓಕರಿಕೆ, ವಾಂತಿ, ತೇಗು, ಸುಸ್ತೂ ಆಗಬಹುದು. ಹಲವಾರು ಒಳಾಂಗಗಳ ಬೇನೆಗಳ, ನಿಜಗೆಲಸ ಕೆಟ್ಟುದರ, ಹೊರಗಣ ಚಿಹ್ನೆ ಅಥವಾ ಲಕ್ಷಣವೇ ಹೊರತು ಅಜೀರ್ಣ ಒಂದು ರೋಗವಲ್ಲ. ನೋವು ನುಲಿತದೊಂದಿಗೆ ಹಸಿವಿನ ನಾಶ, ನಾಲಗೆ ರುಚಿಗೆಡಿಕೆ, ಬಾಯಲ್ಲಿ ನೀರೂರಿಕೆ, ಎದೆಮುಗುಳಲ್ಲಿ ಭಾರದ ಅನುಭವ ಆಗಬಹುದು. ಮಲ ಕಟ್ಟುವುದು ಅಜೀರ್ಣದಲ್ಲಿ ಸಾಮಾನ್ಯವಾದರೂ ಉಚ್ಚಾಟ ಅಪೂರ್ವವಲ್ಲ. 

	ತಿಂದ ಆಹಾರ ಚೆನ್ನಾಗಿ ಪಚನ ಆಗದಿದ್ದರೆ ಅಜೀರ್ಣ ಆಗುತ್ತದೆ. ಬಾಯಿಂದ ಹಿಡಿದು ಗುದದ ತನಕ ಆಹಾರನಾಳದಲ್ಲಿ ಎಲ್ಲಾದರೂ ಹೀಗಾಗಿ, ಹಲವಾರು ಪಚನ ರಸಗಳ ಸುರಿಕೆಗಳ ವ್ಯತ್ಯಾಸ, ಆಹಾರ ಮುಂದೆ ಸಾಗುವ ವೇಗದಲ್ಲಿ ಹೆಚ್ಚೂ ಕಡಿಮೆ ಪಚನವಾದ ಉಣಿಸು ಹೀರಿಕೊಂಡು ರಕ್ತಗತವಾಗುವುದರಲ್ಲಿ ನಿಧಾನ, ಜಠರ ಕರುಳುಗಳಲ್ಲಿ ಏಳುವ ಹುಣ್ಣು ಇವುಗಳಿಂದಲೂ ಅಜೀರ್ಣ ಕಾಣಿಸಿಕೊಳ್ಳುವುದು ಸಾಮಾನ್ಯ. ಅಜೀರ್ಣಕ್ಕೆ ಮನಸ್ಸಿನ ಇರುಸುಮುರುಸುಗಳೂ ಕಾರಣವಾಗಬಹುದು. ಆದುದರಿಂದಲೇ ಊಟದ ಹೊತ್ತಿನಲ್ಲಿ ಯಾವ ಚಿಂತೆಗಳನ್ನೂ ಹತ್ತಿರ ಸುಳಿಯಗೂಡಬಾರದು. ಜಠರವನ್ನು ಕೆರಳಿಸುವ ಮಸಾಲೆ, ಕರಿದ ತಿಂಡಿಗಳನ್ನು ಬಿಟ್ಟು, ತಿನ್ನುವುದನ್ನು ಚೆನ್ನಾಗಿ ನಿಧಾನವಾಗಿ ಅಗಿದು ಜೊಲ್ಲಿನೊಂದಿಗೆ ನುಂಗುವುದರಿಂದ ಅಜೀರ್ಣ ತುಸುಮಟ್ಟಿಗೆ ತಗ್ಗುವುದು. ಒಬ್ಬರ ಪಚನ ಬಲವನ್ನು ನಾಲಗೆಯನ್ನು ನೋಡಿ ತಿಳಿಯಬಹುದು. ಹುಳುಕು ಹಲ್ಲು, ಹಲ್ಲಿರದಿರುವಿಕೆ, ಒಸಡುಹುಣ್ಣು ಇವು ಅಜೀರ್ಣಕ್ಕೆ ದಾರಿಗೊಡುತ್ತವೆ. ಮಿತಿಗೆಟ್ಟು ತಿನ್ನುವುದು, ಕುಡಿತ, ರಾತ್ರಿ ಹೊತ್ತುಮೀರಿ ಹೊಟ್ಟೆಬಿರಿಯ ತಿನ್ನುವುದು-ಇವುಗಳಿಂದ ಅಜೀರ್ಣ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಊಟಗಳ ನಡುವೆ ತಿಂಡಿಗಳನ್ನು ಕುರುಕುತ್ತಿರುವುದು ಕೆಟ್ಟದ್ದು. ಈಲಿ (ಲಿವರ್), ಮಾಂಸಲಿ (ಪ್ಯಾಂಕ್ರಿಯಾಸ್), ಪಿತ್ತಕೋಶ, ಕರುಳುವಾಳ (ಅಪೆಂಡಿಕ್ಸ್), ಅಲ್ಲದೆ ಆಹಾರ ನಾಳದಲ್ಲಿ ಎಲ್ಲಾದರೂ ಏಳುವ ಸಾಮಾನ್ಯ ಗಂತಿಗಳೂ ಏಡಿಗಂತಿಗಳೂ ಅಜೀರ್ಣಸೂಚಕಗಳಾಗಬಹುದು. ಹೊಗೆಸೊಪ್ಪು, ಮದ್ಯಸಾರ ಎರಡೂ ಅಜೀರ್ಣಕಾರಿಗಳು. ಅಂತಸ್ರಾವ ಗ್ರಂಥಿಗಳ ಕೆಲಸ ಕೆಟ್ಟಿದ್ದರೂ ಅಜೀರ್ಣವಾಗಬಹುದು. ಅಡ್ರಿನಲ್ ಗ್ರಂಥಿಯ ರೋಗವಾದ ಅಡಿಸನ್ನಿನ ರೋಗದಲ್ಲಿ ವಾಂತಿ, ಸುಸ್ತು ಸಾಮಾನ್ಯ. ಗುರಾಣಿಕ (ತೈರಾಯ್ಡ್) ಗ್ರಂಥಿ ರೋಗದಲ್ಲೂ ಅಜೀರ್ಣ, ಕೆಲವೇಳೆ ಇದ್ದಕ್ಕಿದ್ದಂತೆ ಉಚ್ಚಾಟ ಸಾಮಾನ್ಯ. ಆದುದರಿಂದ ಕೆಲವೇ ದಿನಗಳಲ್ಲಿ ಅಜೀರ್ಣ ಕಳೆಯದಿದ್ದರೆ, ವೈದ್ಯರ ಸಲಹೆಯನ್ನು ಕೂಡಲೇ ಪಡೆಯಬೇಕು.				
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ